ಹೊಟ್ಟೆಗೆ ಸಂಬಂಧಪಟ್ಟಂತಹ ಮಲಬದ್ಧತೆ, ಗ್ಯಾಸ್ಟ್ರಿಕ್, ಅಜೀರ್ಣ ಮುಂತಾದ ಸಮಸ್ಯೆಗಳು ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ಎಸಿಡಿಟಿ ಎನ್ನುವುದು ಶೇ.40ರಿಂದ 50ರಷ್ಟು ಜನರಲ್ಲಿ ಕಂಡುಬರುತ್ತಿರುವುದು ನಮ್ಮ ತಪ್ಪು ಆಹಾರಪದ್ಧತಿ ಹಾಗೂ ಜೀವನಶೈಲಿಯನ್ನು ವ್ಯಕ್ತಪಡಿಸುತ್ತದೆ. ಈ ‘ಹೊಟ್ಟೆ ಉಬ್ಬರ’ ಸಮಸ್ಯೆಗೆ ಕಾರಣವೇನು ಹಾಗೂ ಇದನ್ನು ಕಡಿಮೆ ಮಾಡಿಕೊಳ್ಳುವ ವಿಧಾನಗಳು ಯಾವುವು ಎಂಬುದರತ್ತ ಗಮನಹರಿಸೋಣ.
ಮುಖ್ಯವಾಗಿ ದೇಹದಲ್ಲಿನ ಎಚ್.ಫೈಲೋರಿ ಎಂಬಸೂಕ್ಷ್ಮಾಣು ಜೀವಿಯಿಂದ ಈ ಗ್ಯಾಸ್ಟ್ರಿಕ್ ಸಮಸ್ಯೆಯು ಬರುವುದು. ನಾವು ತಿನ್ನುವಂತಹ ಆಹಾರವು ಈ ಸೂಕ್ಮಾಣು ಜೀವಿಯ ವರ್ಧನೆಗೆ ಕಾರಣವಾದಾಗ ಗ್ಯಾಸ್ಟ್ರಿಕ್ ತೊಂದರೆಯು ಉಲ್ಬಣವಾಗುವುದು. ಪ್ರಮುಖವಾಗಿ ಉಪ್ಪಿನ ಸೇವನೆಯಿಂದಾಗಿ ಎಚ್.ಫೈಲೋರಿ ಬ್ಯಾಕ್ಟೀರಿಯಾ ಹೆಚ್ಚಾಗುವುದು. ಆದ್ದರಿಂದ ಉಪ್ಪಿನ ಸೇವನೆಯನ್ನು ಕಡಿಮೆಮಾಡಬೇಕು. ಇದರಿಂದಾಗಿ ಶೇ. 70ರಷ್ಟು ಎಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.
ಸಾಮಾನ್ಯವಾಗಿ ಹೆಚ್ಚು ಮಸಾಲೆ ತಿಂದರೆ, ನಿಂಬೆಹಣ್ಣು, ಹುಳಿಹಣ್ಣುಗಳನ್ನು ಸೇವಿಸಿದರೆ ಎಸಿಡಿಟಿ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ ಇದು ಎಸಿಡಿಟಿಗೆ ಕಾರಣವಲ್ಲ. ಬೇಕರಿಯ ಆಹಾರ, ಕರಿದ ಆಹಾರ ಪದಾರ್ಥಗಳು, ಮುಖ್ಯವಾಗಿ ಉಪ್ಪು ಹಾಗೂ ಉಪ್ಪಿನಕಾಯಿ ಇದರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಈ ರೀತಿಯ ಆಹಾರ ಪದಾರ್ಥಗಳನ್ನು ಕಡಿಮೆಮಾಡಬೇಕು.
ಹುಳಿಯಿಲ್ಲದ ಮೊಸರು, ಮಜ್ಜಿಗೆಯ ಸೇವನೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗುವುದು. ಶುಂಠಿಯನ್ನು ಮಜ್ಜಿಗೆಯ ಜೊತೆ ಸೇರಿಸಿ ಕುಡಿಯಬಹುದು. ಯಷ್ಠಿಮಧು ಅಥವಾ ಅತಿಮಧುರದ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಕುಡಿಯಬಹುದು. ಅಕ್ಕಿಗಂಜಿ ಅಥವಾ ರಾಗಿಗಂಜಿ ಮಾಡಿ ಹನ್ನೆರಡು ತಾಸು ಇಟ್ಟು ನಂತರ ಹುಳಿಯಿಲ್ಲದ ಮೊಸರಿನೊಂದಿಗೆ ಸೇವಿಸಿದರೆ ಸಾಕಷ್ಟು ಉತ್ತಮ ಬ್ಯಾಕ್ಟೀರಿಯಾ ದೊರೆತು ಎಸಿಡಿಟಿಯ ಮೂಲ ಕಾರಣ ನಿವಾರಣೆಯಾಗಲು ಸಹಕಾರಿ.
ಈ ಉಪಾಯವನ್ನು ಕನಿಷ್ಟ ಒಂದು ತಿಂಗಳು ಮಾಡಿದಾಗ ಉತ್ತಮ ಫಲಿತಾಂಶ ಲಭ್ಯವಾಗುವುದು. ಬೂದುಗುಂಬಳಕಾಯಿಜ್ಯೂಸ್ ಎಸಿಡಿಟಿ ಕಡಿಮೆಮಾಡಲು ಅತ್ಯಂತ ಪರಿಣಾಮಕಾರಿ. ಹಣ್ಣುಗಳ ಸೇವನೆಯೂ ಸಹ ಒಳ್ಳೆಯದು. ದಾಳಿಂಬೆಜ್ಯೂಸ್, ಸೇಬುಜ್ಯೂಸ್‍ಗಳ ಸೇವನೆ ಉತ್ತಮ. ಅಲ್ಲದೇ, ‘ವಮನಧೌತಿ’ ಯೋಗಕ್ರಿಯೆಯು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆಮಾಡಲು ಬಹಳ ಒಳ್ಳೆಯದು. ಜೊತೆಯಲ್ಲಿ ಮಣ್ಣಿನ ಚಿಕಿತ್ಸೆ, ತಂಪು ಕಟಿಸ್ನಾನಚಿಕಿತ್ಸೆಯಂತ ಪ್ರಕೃತಿ ಚಿಕಿತ್ಸೆಗಳೂ ಎಸಿಡಿಟಿಯನನ್ನು ಕಡಿಮೆಮಾಡಲು ಉಪಯೋಗಕಾರಿ.
ಹಾಗಾಗಿ ಈ ಮೇಲಿನ ಎಲ್ಲಾ ಚಿಕಿತ್ಸೆಗಳನ್ನು ಆಹಾರದ ಸಮಯೋಚಿತ ಸರಿಯಾದ ಪದ್ಧತಿಯೊಂದಿಗೆ ಅನುಸರಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಖಂಡಿತವಾಗಿ ಕಡಿಮೆಯಾಗುವುದು. ಆ ಮೂಲಕ ನಮ್ಮ ಸಮಸ್ಯೆಯನ್ನು ನಿವಾರಿಸುವ ಕುರಿತು, ಆ ಸಮಸ್ಯೆಯ ಫಲಾಫಲಗಳ ಕುರಿತು ನಾವು ಶಿಕ್ಷಣವನ್ನು ಪಡೆದು ಅದರ ನಿವಾರಣೆಗೆ ಪ್ರಯತ್ನ ಮಾಡಬೇಕು. ಹಾಗಾದಾಗ ಖಂಡಿತವಾಗಿಯೂ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಲು ಸಾಧ್ಯ.
ಮೂಲ: ಡಾ|| ವೆಂಕಟ್ರಮಣ ಹೆಗಡೆ
No comments:
Post a Comment