Join Us on : WhatsApp | Mobile app

Monday, March 3, 2025

ಪ್ರಮುಖ ಮಕ್ಕಳ ಸಾಹಿತಿಗಳ ಕಿರುಪರಿಚಯ

 ಪ್ರಾಚೀನ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯವು ಹಲವಾರು ಸಾಹಿತ್ಯ ಪ್ರಕಾರಗಳ ಮೂಲಕ ತನ್ನ ಒಡಲನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಂತಹ ಸಾಹಿತಿಕ ಪ್ರಕಾರದಲ್ಲಿ ಒಂದು ಮಕ್ಕಳ ಸಾಹಿತ್ಯ. ’ಬೆಳೆಯುವ ಪೈರು ಮೊಳಕೆಯಲ್ಲಿಯೇ’ ಎಂಬಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರ, ನಡೆ ನುಡಿಗಳನ್ನು ರೂಡಿಸಿಕೊಳ್ಳುವಂತಾಗುವಲ್ಲಿ ಮಕ್ಕಳ ಸಾಹಿತ್ಯದ ಪಾತ್ರವು ಹಿರಿದಾದುದರಲ್ಲಿ ಎರಡು ಮಾತಿಲ್ಲ. ಬರಿ ಮಾತಿನಿಂದ ಏನೇ ಹೇಳಿದರು ಮಕ್ಕಳ ಮೇಲೆ ಅದು ಯಾವುದೇ ರೀತಿಯ ಪರಿಣಾಮಕಾರಿಯಾಗುವುದಿಲ್ಲ. ಬರಿ ಮಾತಿನ ಬದಲಿಗೆ ಕತೆ, ಕವಿತೆ, ನಾಟಕದಿಂದ ಅದೇ ಮಾತನ್ನು ಮಕ್ಕಳಿಗೆ ಹೇಳಿದರೆ ಅದು ಪರಿಣಾಮಕಾರಿಯಾದುದಕ್ಕೆ ಮಹತ್ಮ ಗಾಂಧೀಜಿಯವರು ಸೇರಿದಂತೆ ಹಲವಾರು ನಿದರ್ಶನಗಳಿವೆ. ಅಂತಹ ಮಕ್ಕಳ ಸಾಹಿತ್ಯ ರಚನೆಗೆ ಹಲವಾರು ಮಹಾನ್ ಸಾಹಿತಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಪ್ರಮುಖ ಮಕ್ಕಳ ಸಾಹಿತಿಗಳ ಹಾಗೂ ಅವರ ಕೃತಿಗಳ ಪರಿಚಯ ಈ ಮುಂದಿನಂತಿದೆ.

1. ಗಂಗಾಧರ ಮಡಿವಾಳೇಶ್ವರ ತುರಮುರಿ


1827-1877,ಬೆಳಗಾವಿ ಜಿಲ್ಲೆಯ ಬೈರವಂಗಲದ ತುರಮುರಿ ಎಂಬಲ್ಲಿ ಜನನ. ಪ್ರಮುಖ ಕೃತಿಗಳು: ಶಬ್ದಮಣಿ ದರ್ಪಣದ ವ್ಯಾಖ್ಯಾನ,ಶಬ್ದಮಂಜರಿ, ರಾಜಶೇಖರ ವಿಳಾಸದ ಮೊದಲನೆ ಆಶ್ವಾಸದ ಟೀಕೆ ಮೊದಲಾದವು.


2.ವೆಂಕಟರಂಗೋ ಕಟ್ಟಿ: 

1833-1909. ಬಟಕುರಕಿ ಗ್ರಾಮದಲ್ಲಿ ಜನನ.’ಅಖಂಡ ಕರ್ನಾಟಕದ ಭೂಪಟ ನಿರ್ಮಿಸಿದ ಕೀರ್ತಿ’ ಇವರದು. ಪ್ರಮುಖ ಕೃತಿಗಳು: ಸುರಸ ಕಥೆಗಳ ಸಂಗ್ರಹ, ಆರು ಬೆರಳಿನ ಕುರುಹು(ನಾಟಕ), ಕರ್ನಾಟಕ ವರ್ಣನೆಯೂ ಇತಿಹಾಸವೂ, ವಿಧವೆಯರ ಮಂಡನ ಅನಾಚಾರವು ಮೊದಲಾದವು.

3. ಚ.ವಾಸುದೇವಯ್ಯ: 1852-1942. ಚನ್ನಪಟ್ಟಣದಲ್ಲಿ ಜನನ. ಪ್ರಮುಖ ಕೃತಿಗಳು : ಕನ್ನಡ ಬಾಲಬೋಧೆ (ಮಕ್ಕಳವೇದವೆಂದು ಪರಿಗಣಿಸಲಾಗಿದೆ), ಛತ್ರಪತಿ ಶಿವಾಜಿ, ಸರಳಾರೋಗ್ಯ, ಭೀಷ್ಮ ಚರಿತೆ ಮೊದಲಾದವು.

4. ಎಂ.ಎಸ್.ಪುಟ್ಟಣ್ಣ :1854-1930. ಮೈಸೂರಿನಲ್ಲಿ ಜನನ. ಪ್ರಮುಖ ಕೃತಿಗಳು: ನೀತಿ ಚಿಂತಾಮಣಿ,ಸುಮತಿ ಮದನಕುಮಾರರ ಚರಿತೆ ಮೊದಲಾದವು.

5. ಕರ್ಕಿಸೂರಿ ವೆಂಕಟರಮಣ ಶಾಸ್ತ್ರಿ: 1855-1925.ಉತ್ತರ ಕನ್ನಡ ಜಿಲ್ಲೆಯ ಕರ್ಕಿಯಲ್ಲಿ ಜನನ. ಹವ್ಯಕ ಸುಭೋಧ ಸಾಪ್ತಾಹಿಕ ಮತ್ತು ಹಿತೋಪದೇಶ ಮಾಸಪತ್ರಿಕೆಗಳನ್ನು ನಡೆಸುತ್ತಿದ್ದರು. ಪ್ರಮುಖ ಕೃತಿಗಳು: ದಕ್ಷಿಣ ಯಾತ್ರಾ ಚರಿತ್ರೆ, ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ, ತುರಂಗ ಭಾರತ ಮೊದಲಾದವು

6. ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ: 1856-1990. ಧಾರವಾಡ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಜನನ.’ಶಾಂತ ಕವಿ’ ಎಂದು ಕನ್ನಡಿಗರಿಗೆ ಚಿರಪರಿಚಿತರು. ಪ್ರಮುಖ ಕೃತಿಗಳು : ಅಡ್ಡ ಕಥೆಗಳ ಬುಕ್ಕ,ಸಿಂಹಾಸನ ಬತ್ತೀಸ, ಪುತ್ಥಳಿ ಕಥೆ, ಕವಿಕಂಠಕುಠಾರ ಮೊದಲಾದವು.

7. ಪಂಜೆ ಮಂಗೇಶರಾಯ :1874-1937. ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ ಜನನ. ಇವರು ಆಧುನಿಕ ಕನ್ನಡ ಸಾಹಿತ್ಯ ಆಚಾರ್ಯ ಪುರುಷರಲ್ಲಿ ಒಬ್ಬರು. ಶಿಶು ಸಾಹಿತ್ಯ ರಚನಾಕಾರರಲ್ಲಿ ಹೆಸರುವಾಸಿಯಾದವರು. ಪ್ರಮುಖ ಕೃತಿಗಳು: ಅಜ್ಜಿ ಕಥೆಗಳು,ನಾಗಣ್ಣನ ಕನ್ನಡಕ,ಅಗೋಳಿ ಮಂಜಣ್ಣ,ಪಂಚಕಜ್ಜಾಯ, ಬಂದಣಿಕೆ, ಸ್ಥಳನಾಮ, ಕೋಟಿ ಚೆನ್ನಯ್ಯ,ಹಾವಿನ ಹಾಡು, ತೆಂಕಣ ಗಾಳಿಯಾಟ,ಹುತ್ತರಿ ಹಾಡು, ಹೊಲೆಯರ ಹಾಡು ಮೊದಲಾದವು.

8. ಹರ್ಡೇಕರ ಮಂಜಪ್ಪ : 1889-1947. ಬನವಾಸಿಯಲ್ಲಿ ಜನನ. ’ಕರ್ನಾಟಕ ಗಾಂಧಿ’ ಎಂದು ಪ್ರಸಿದ್ಧರಾಗಿದ್ದಾರೆ. ಪ್ರಮುಖ ಕೃತಿಗಳು: ಆರೋಗ್ಯ ಜೀವನ, ಭಾಗ್ಯದ ಬೀಗದಕೈ, ಗೋಸೇವೆ, ಅಣ್ಣನ ಪ್ರೀತಿ, ಅಕ್ಕನ ಉಪದೇಶ, ಕಾಯಕವೇ ಕೈಲಾಸ, ಏಕಲವ್ಯನ ಕಥೆ, ಕಚದೇವನ ಕಥೆ, ದೇವಯಾನಿಯ ಕಥೆ, ಅಕ್ಕ ಮಹಾದೇವಿಯ ಕಥೆ, ಶ್ರೀ ಬಸವ ಚರಿತ್ರೆ ಮೊದಲಾದವು.

9.ಆರ್.ಕಲ್ಯಾಣಮ್ಮ: 1894-1965. ಬೆಂಗಳೂರಿನಲ್ಲಿ ಜನನ. ಮಕ್ಕಳಕೂಟದ ಸ್ಥಾಪಕಿ.” ಸರಸ್ವತಿ” ಪತ್ರಿಕೆಯನ್ನು ಪ್ರಾರಂಭಿಸಿದರು. ಜೊತೆಗೆ ಶ್ರೀ ಶಾರದಾ ಸ್ತ್ರೀ ಸಮಾಜ ಸ್ಥಾಪನೆಯನ್ನೂ ಮಾಡಿದ್ದಾರೆ. ಪ್ರಮುಖ ಕೃತಿಗಳು: ಪ್ರಿಯಂವದೆ, ನಿರ್ಭಾಗ್ಯ ವನಿತೆ, ಸುಖಾಂತ, ಭಕ್ತಮೀರ, ಮಾಧವಿ ನಿರ್ಮಲಾ, ವರದಕ್ಷಿಣೆ, ನಿರ್ಮಲಾ ಮೊದಲಾದವು.

10. ನಾ.ಕಸ್ತೂರಿ: 1897-1987. ಕೇರಳಾದ ತಿಪ್ಪೊನಿತುರದ್ದಲ್ಲಿ ಜನನ. ಪ್ರಮುಖ ಕೃತಿಗಳು : ಪಾತಾಳದಲ್ಲಿ ಪಾಪಚ್ಚಿ, ಕಂಪನ-ನವರಾತ್ರಿ, ಗಾಳಿಗೋಪುರ,ಅಣುಕು-ಮಿಣುಕು, ಉಪಾಯ ವೇದಾಂತ,ಗಗ್ಗಯ್ಯನ ಗಡಿಬಿಡಿ, ವರ ಪರೀಕ್ಷೆ ಮೊದಲಾದವು.

11.ಕೊರಡ್ಕಲ್ ಶ್ರೀನಿವಾಸರಾವ್ : 1894-1948. ಶೃಂಗೇರಿ ಬಳಿಯ ಕೊರಡ್ಕಲ್ ಎಂಬಲ್ಲಿ ಜನನ.  ಪ್ರಮುಖ ಕೃತಿಗಳು: ಪದ್ಮಾವಳಿ, ಆರೋಗ್ಯ ಪ್ರತಾಪ, ನಂದಾದೀಪ, ಧರ್ಮಸಂಕಟ, ಸುಶೀಲಾ ಸುಂದರ, ಸುಲಭದಲ್ಲಿ ಇಂಗ್ಲೀಷ್ ಮೊದಲಾದವು.

12. ದೇವುಡು ನರಸಿಂಹಶಾಸ್ತ್ರಿ: 1897-1962. ಮೈಸೂರಿನಲ್ಲಿ ಜನನ. ಪ್ರಮುಖ ಕೃತಿಗಳು:ಬುದ್ದಿಯ ಕಥೆಗಳು, ದೇಶಾಂತರದ ಕಥೆಗಳು, ಮೂಢರಕಥೆಗಳು, ಕಥಾ ಸರಿತ್ಸಾಗರ, ಕುಮಾರ ಸಾಹಿತ್ಯ, ಕಂದನ ಕಥೆಗಳು ಬಾಲ ರಾಮಾಯಣ, ಬಾಲ ಭಾಗವತ ಮೊದಲಾದವು.

13. ಶಿವರಾಮ ಕಾರಂತ: 1902-1997. ದಕ್ಷಿಣ ಕನ್ನಡ ಜಿಲ್ಲೆಯ ಕೊಟದಲ್ಲಿ ಜನನ, ಪ್ರಮುಖ ಕೃತಿಗಳು: ಡಂಡಂ ಡೋಲು, ಮೀಸೆಯ ಬಂಟು, ಬೊಬ್ಬೊಬ್ಬೋ ಬೊಮ್ಮ, ಗಜರಾಜ, ಹುಲಿರಾಯ, ಮಂಗನ ಮದುವೆ ಮೊದಲಾದವು.

14. ಎಲ್.ಗುಂಡಪ್ಪ:1903-1986. ಹಾಸನ ಜಿಲ್ಲೆ ಮತಿಘಟ್ಟದಲ್ಲಿ ಜನನ. ಪ್ರಮುಖ ಕೃತಿಗಳು:ಕಳ್ಳಮರಿ, ಮಕ್ಕಳ ರವೀಂದ್ರರು, ನಾಡ ಪದಗಳು, ಕನ್ನಡ ವ್ಯಾಕರಣ ಪಾಠಗಳು, ಮುಕುಂದ ಮಾಲ ಮೊದಲಾದವು.

15. ಕುವೆಂಪು: 1904-1994. ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನನ. ಪ್ರಮುಖ ಕೃತಿಗಳು: ಬೊಮ್ಮನಹಳ್ಳಿಯ ಕಿಂದರಿಜೋಗಿ, ಅಮಲನ ಕಥೆ, ಹಾಳೂರು ನನ್ನಮನೆ, ಮಠಿ ವಿಜ್ಞಾನಿ ಮತ್ತು ಮೇಘಪುರ ಮೊದಲಾದವು.

16. ಸಿಂಪಿ ಲಿಂಗಣ್ಣ: 1905-1993. ಬಿಜಾಪುರ ಜಿಲ್ಲೆಯ ಚಡಚಣದಲ್ಲಿ ಜನನ.’ಭರತ’ ಎಂಬುದು ಇವರ ಕಾವ್ಯನಾಮ.ಪ್ರಮುಖ ಕೃತಿಗಳು: ದೇಶಭಕ್ತಿಯ ಕಥೆಗಳು, ವಿಶ್ವಾಮಿತ್ರನ ಸಾಹಸ, ಜೀವನ ದೃಷ್ಟಿ, ಬಾಳಬಟ್ಟೆ, ಜನಾಂಗದ ಜೀವನ. ಗರತಿಯ ಬಾಳು ಮೊದಲಾದವು.

17. ಎಚ್.ವೈ.ಸರಸ್ವತಮ್ಮ;1906-1993. ಬೆಂಗಳೂರಿನಲ್ಲಿ ಜನನ. ಪ್ರಮುಖ ಕೃತಿಗಳು: ಅಜ್ಜಿಯ ರುಜು, ಮಕ್ಕಳ ಸಚಿತ್ರ ಭಾರತ ಮೊದಲಾದವು.

18. ಕುಲಕರ್ಣಿ ಎನ್.ಎಸ್:1906-1978.ಪ್ರಮುಖ ಕೃತಿಗಳು: ಭೂಮಂಡಲ ಬೋಧಿನಿ, ನನ್ನ ತಾಯಿ,ನಾಡ ನೆಲೆಗಾರ ಮೊದಲಾದವು.

19. ಜಿ.ಪಿ. ರಾಜರತ್ನ: 1908-1979. ರಾಮನಗರದಲ್ಲಿ ಜನನ. ಪ್ರಮುಖ ಕೃತಿಗಳು: ಬಣ್ಣದ ತಗಡಿನ ತುತ್ತೂರಿ, ಕಥಾಕೋಶ, ರತ್ನನ ಪದಗಳು, ಬುದ್ದವಚನ ಪರಿಚಯ ಮೊದಲಾದವು.

20. ದಿನಕರ ದೇಸಾಯಿ: 1909-1982. ಅಂಕೋಲದಲ್ಲಿ ಜನನ. ಪ್ರಮುಖ ಕೃತಿಗಳು: ಮಕ್ಕಳ ಗೀತೆಗಳು, ಮಕ್ಕಳ ಪದ್ಯಗಳು, ಹೂಗೊಂಚಲು, ದಿನಕರ ಚೌಪದಿ ಮೊದಲಾದವು.

21. ಟಿ.ಎಂ.ಸ್ವಾಮಿ: 1911-1947. ’ಕನ್ನಡ ಕಣಜ’ ಸಂಪಾದಕರು. ಪ್ರಮುಖ ಕೃತಿಗಳು: ಪಾಯಸದ ಪಟ್ಟಣ, ಬೆಂಕಿಕೋಳಿ, ಗುಲಾಬಿ, ರಂಕಲ್ ರಾಟಿ, ಕೊಕ್ಕರೆಯ ಕತ್ತೇಕೆ ಕೊಂಕು, ಪಟಾಕಿ ಪುಟ್ಟುವಿನ ಕಥೆಗಳು ಮೊದಲಾದವು.

22. ಬಿ,ಶ್ರೀ.ಪಾಂಡುರಂಗರಾವ್: 1913-1993. ಬೆಂಗಳೂರಿನಲ್ಲಿ ಜನನ. ಪ್ರಮುಖ ಕೃತಿಗಳು: ಕಲ್ಲು ಸಕ್ಕರೆ ಬೆಟ್ಟ, ಕನ್ನಡ ಮಕ್ಕಳ ಸಾಹಿತ್ಯದ ಹೆಜ್ಜೆ, ಶಾಲೆಯ ಶೂರರು, ಮರವೇರಿದ ಹುಂಜ ಮೊದಲಾದವು.

23. ಭಾರತೀಸುತ: 1915-1976. ಮಡಿಕೇರಿ ತಾಲ್ಲೂಕಿನ ಬಿಳಿಗೇರಿಯಲ್ಲಿ ಜನನ. ಪ್ರಮುಖ ಕೃತಿಗಳು:ಕೊಪ್ಪರಿಗೆ ಚಿನ್ನ, ಗೀಗಿಕಥೆ, ಹೋತನ ಬೆನ್ನೇರಿದ ತೋಳ, ಕಾಣೆಯಾದ ಕಬ್ಬಿಣರಾಯ, ಹನ್ನೊಂದು ಹಂಸಗಳು ಮೊದಲಾದವು.

24. ಡಾ.ಸಿದ್ದಯ್ಯ ಪುರಾಣಿಕರು:1918-1994. ಯಲಬುರ್ಗಿ ತಾಲ್ಲೂಕಿನ ದ್ಯಾಂಪುರದಲ್ಲಿ ಜನನ. ಕಾವ್ಯಾನಂದ ಎಂಬುದು ಕಾವ್ಯನಾಮ. ಪ್ರಮುಖ ಕೃತಿಗಳು:ಶುಕವನ, ಸಮುದ್ರಲೋಕ, ತುಷಾರಹಾರ, ಬಣ್ಣಬಣ್ಣದ ಓಕುಳಿ ಮೊದಲಾದವು.

25. ಪ್ರೊ.ಎಂ.ವಿ ಸೀತಾರಾಮಯ್ಯ: 1910-1990. ಮೈಸೂರಿನಲ್ಲಿ ಜನನ. ಪ್ರಮುಖ ಕೃತಿಗಳು: ಹಾವಾಡಿಗ, ಹೂವಾಡಗಿತ್ತಿ, ಕುಮಾರ ಗೌತಮ, ಯುಧಿಷ್ಟಿರ, ನಮ್ಮ ಪುಸ್ತಕ, ಶ್ರೀಕೃಷ್ಣಬಾಲಲೀಲೆ ಮೊದಲಾದವು.

26. ಹೆಚ್.ಶ್ರೀನಿವಾಸ ಮೂರ್ತಿ: 1924. ಚಿತ್ರದುರ್ಗದಲ್ಲಿ ಜನನ. ಪ್ರಮುಖ ಕೃತಿಗಳು: ನಂದಾದೀಪ, ಬಾಪುವಾಣಿ, ಗಾಂಧಿ ದಂಡು, ಗಾಂಧಿ ತಾತ, ಮಕ್ಕಳ ಮಂಡಿಗೆ, ಹುಟ್ಟಿದ ಹಬ್ಬ, ನನ್ನ ದೋಣಿ ಮೊದಲಾದವು.

27. ಫಳಕಳ ಸೀತಾರಾಮ ಭಟ್ಟ: 1931. ದ.ಕ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನನ. ಪ್ರಮುಖ ಕೃತಿಗಳು: ಎಳೆಯರ ಗೆಳೆಯ, ಕಂದನ ಕೊಳಲು, ತಮ್ಮನ ತಂಬೂರಿ, ಬಾಲರ ಬಾವುಟ, ಮಕ್ಕಳ ಮುದ್ದು, ಪುಟ್ಟನ ಪೀಪಿ, ಗಾಳಿಪಟ, ಕಿರಿಯರ ಕಿನ್ನರಿ, ಮಿಠಾಯಿ ಗೊಂಬೆ ಮೊದಲಾದವು.

28.ಡಾ.ನಿರುಪಮಾ: 1933. ತುಮಕೂರು ಜಿಲ್ಲೆಯ ಹೊಳವನಹಳ್ಳಿಯಲ್ಲಿ ಜನನ. ಪ್ರಮುಖ ಕೃತಿಗಳು: ಕಸ್ತೂರಿಬಾ, ವಿಶ್ವನಾಥ ಸತ್ಯನಾರಾಯಣ, ನಮ್ಮ ಬಾವುಟದ ಕಥೆ, ಚಂದಕ್ಕಿಮಾಮ, ಬಾತು ಬಂಗಾರದ ಮೊಟ್ಟೆ, ಪಟ್ಟಣದ ಇಲಿ, ಸ್ವತಂತ್ರ ಹೋರಾಟದ ಕಥೆ ಮೊದಲಾದವು.

29. ಡಾ.ಅನುಪಮಾ ನಿರಂಜನ: 1934-1991. ತೀರ್ಥಹಳ್ಳಿಯಲ್ಲಿ ಜನನ. ಪ್ರಮುಖ ಕೃತಿಗಳು: ದಿನಕ್ಕೊಂದು ಕಥೆ, ಆರೋಗ್ಯ ದರ್ಶನ, ಕಲ್ಲೋಲ, ಏಳುಸುತ್ತಿನ ಮಲ್ಲಿಗೆ, ಶಿಶುವೈದ್ಯ ದೀಪಿಕೆ ಮೊದಲಾದವು.

ಗ್ರಂಥ ಋಣ:

1. ಮಕ್ಕಳ ಸಾಹಿತ್ಯದ ನೆಲೆ-ಬೆಲೆ  - ಎಸ್.ವಿ.ಶ್ರೀನಿವಾಸರಾವ್

2. ಕನ್ನಡ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ

3. ಕನ್ನಡ ಸಾಹಿತ್ಯ ಕೋಶ – ರಾಜಪ್ಪ ದಳವಾಯಿ.

4. ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ – ಚಿ ನಿಂಗಣ್ಣ

No comments:

Post a Comment