Join Us on : WhatsApp | Mobile app

Sunday, November 8, 2020

ಸಂಧಿ, ಕೀಲು ನೋವು–ಬಾವು

 

ಸಂಧಿವಾತ ಎಂದರೆ ಏನು,ಅದು ವ್ಯಕ್ತಿಗಳಿಗೆ ಹೇಗೆ ಬರುತ್ತದೆ


-ಸಾಮಾನ್ಯವಾಗಿ ಕೀಲು ಜೋಡಣೆಯಲ್ಲಿನ ಮೂಳೆಗಳ ಮೇಲೆ ಅತ್ಯಂತ ಮೃದುವಾದ ಕಾರ್ಟಿಲೇಜ್ (ಮೃದ್ವಸ್ಥಿ) ಇದ್ದು ಇದರಿಂದ ಚಲನೆ ಘರ್ಷಣೆ ರಹಿತವಾಗುತ್ತದೆ. ಈ ಕೀಲಿನ ಕಾರ್ಟಿಲೇಜ್‌ನಲ್ಲಿ ಹಾನಿ ಉಂಟಾದರೆ ಅದು ಸಂಧಿವಾತಕ್ಕೆ ದಾರಿಯಾಗುತ್ತದೆ. ಅತ್ಯಂತ ಸಾಮಾನ್ಯವಾದ ಮಾದರಿ ಎಂದರೆ ಓಸ್ಟಿಯೋ ಆರ್ಥರೈಟಿಸ್ ಆಗಿದೆ. ಇದು ಹೆಚ್ಚಿನ ಸವೆತದಿಂದ ಉಂಟಾಗುತ್ತದೆ. ಬೊಜ್ಜು ಮೈ, ಹಿಂದಿನ ಗಾಯ, ಅಥವ ಮೂಳೆಗಳ ತಪ್ಪು ಜೋಡಣೆಯಿಂದ ಕಂಡು ಬರುತ್ತದೆ. ಮತ್ತೊಂದು ಮಾದರಿಯಾದ ರುಮಟೈಡ್‌ ಆರ್ಥರೈಟಿಸ್‌ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯ ಲೋಪದಿಂದ ಕಂಡುಬರುತ್ತದೆ.

ಆರ್ಥರೈಟಿಸ್‌ಗೆ ಯಾವುದೇ ಔಷಧಗಳು ಇಲ್ಲ ಎಂದು ಕೇಳಿದ್ದೇನೆ. ಇದು ನಿಜವೇ


–ಓಸ್ಟಿಯೋ ಆರ್ಥರೈಟಿಸ್‌ಗೆ ನೋವು ನಿವಾರಕಗಳನ್ನು ಎಚ್ಚರಿಕೆಯೊಂದಿಗೆ, ಅಲ್ಪಕಾಲದವರೆಗೆ ಹಾಗೂ ವೈದ್ಯರ ಮೇಲ್ವಿಚಾರಣೆಯಡಿ ಮಾತ್ರ ತೆಗೆದು ಕೊಳ್ಳಬೇಕು. ಅದರ ದುರುಪಯೋಗದಿಂದ ಗಂಭೀರವಾದ ದುಷ್ಪರಿಣಾಮಗಳಿಗೆ ದಾರಿಯಾಗಬಹುದು. ರುಮಟಾಯ್ಡ್‌ಆರ್ಥರೈಟಿಸ್ ನಿಯಂತ್ರಣಕ್ಕೆ ಮತ್ತು ಸಂಕೀರ್ಣ ತೊಂದರೆಗಳನ್ನು ತಡೆಯುವುದಕ್ಕೆ ಔಷಧಗಳ ಸೇವನೆ ಕಡ್ಡಾಯವಾಗಿರುತ್ತದೆ. ವೈದ್ಯರು ಮಾತ್ರ ಸೂಚಿಸುವಂತಹ ಔಷಧಗಳು ಇವುಗಳಾಗಿದ್ದು ಹತ್ತಿರದ ನಿರೀಕ್ಷಣೆ ಅಗತ್ಯ. ಅಲ್ಲದೆ ರುಮಟಾಲಾಜಿಸ್ಟ್‌ ಅವರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು.

ಕೀಲಿನಲ್ಲಿನ ಕಾರ್ಟಿಲೇಜ್‌ಗೆ ಹಾನಿ ಆದರೆ ದುರಸ್ತಿ ಸಾಧ್ಯವಿದೆಯೇ


-ಕಾರ್ಟಿಲೇಜ್‌ಗೆ ಉಂಟಾಗುವ ಹಾನಿಯನ್ನು ಆರಂಭದ ಹಂತದಲ್ಲಿ ಮಾತ್ರ ದುರಸ್ತಿ ಮಾಡಬಹುದು. ಗಾಯದಿಂದಾಗಿ ಕಾರ್ಟಿಲೇಜ್ ಹಾನಿಗೆ ಗುರಿಯಾಗುವ ಯುವ ರೋಗಿಗಳಿಗಾಗಿ ಪ್ರಯೋಗಾಲಯದಲ್ಲಿ ಅವರ ಕಾರ್ಟಿಲೇಜ್‌ ಅನ್ನು ಮತ್ತೆ ಬೆಳೆಸಿ ಅವರಿಗೆ ಶಸ್ತ್ರಕ್ರಿಯೆಯ ಮೂಲಕ ಮರು ಜೋಡಣೆ ಮಾಡಿ ಸಹಾಯ ಮಾಡಬಹುದು. ಇದರಿಂದ ಭವಿಷ್ಯದಲ್ಲಿ ಸಂಧಿವಾತ ಅಭಿವೃದ್ಧಿ ಹೊಂದುವ ಅಪಾಯವನ್ನು ಕಡಿಮೆ ಮಾಡಬಹುದು. ಕಾರ್ಟಿಲೇಜ್ ದುರಸ್ತಿಗೆ ಸಹಾಯ ಮಾಡುವ ಹಲವಾರು ಪೋಷಕಾಂಶಗಳು ಲಭ್ಯವಿದ್ದು ಆರಂಭದ ಆರ್ಥರೈಟಿಸ್ ಹಂತಗಳಲ್ಲಿ ಇವು ಕೆಲವು ಲಾಭಗಳನ್ನು ಹೊಂದಿವೆ.

ನಾನು ಮೂರು ವರ್ಷಗಳಿಂದ ಆರ್ಥರೈಟಿಸ್‌ ರೋಗಿಯಾಗಿದ್ದು ಆರಾಮವಾಗಿದ್ದೆ. ಆರು ವಾರಗಳ ಮುನ್ನ ಮಂಡಿ ತಿರುಚಿದ್ದು ಅಂದಿನಿಂದ ತೊಂದರೆಯಾಗುತ್ತಿದೆ. ಅದು ಸುಧಾರಣೆ ಕಾಣುತ್ತಿಲ್ಲ. ನಾನು ಏನು ಮಾಡಬೇಕು


-ಆರ್ಥರೈಟಿಸ್‌ನಿಂದ ದುರ್ಬಲವಾಗಿರುವಂತಹ ದೇಹದ ನೈಸರ್ಗಿಕ ಆಘಾತ ಹೀರಕಗಳಾದ ಮೆನಿಸ್ಕಸ್‌ಗೆ ಮಂಡಿ ತಿರುಚುವುದರಿಂದ ಉಂಟಾಗುವ ಗಾಯಗಳಲ್ಲಿ ಹಾನಿಯಾಗುತ್ತದೆ. ಕಚ್ಚಿಕೊಳ್ಳುವುದು, ಊತ, ಹಿಡಿದುಕೊಳ್ಳುವುದು ಇದ್ದಲ್ಲಿ ಮತ್ತು ಇದು ವಿಶ್ರಾಂತಿ ಮತ್ತು ಫಿಜಿಯೋ ಥೆರಪಿಯಿಂದಲೂ ಸುಧಾರಣೆ ಕಾಣದಿದ್ದಲ್ಲಿ ಆಥ್ರೋಸ್ಕೋಪಿಕ್ ಸರ್ಜರಿ ಎಂಬ ಕೀ ಹೋಲ್ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ಸಹಾಯ ಮಾಡಬಹುದು. ಘರ್ಷಣೆಯನ್ನು ಕಡಿಮೆ ಮಾಡುವಂತಹ ಕೀಲಿನ ಭಾಗಕ್ಕೆ ನೀಡಲಾಗುವ ಲೂಬ್ರಿಕೇಟಿಂಗ್‌ ಇಂಜೆಕ್ಷನ್‌ ಅನ್ನು ಹೆಚ್ಚುವರಿಯಾಗಿ ನೀಡಬಹುದು.

ನಾನು 65 ವರ್ಷದವನಾಗಿದ್ದು ಆರ್ಥರೈಟಿಸ್‌ನಿಂದಾಗಿ ಹಲವಾರು ವರ್ಷಗಳಿಂದ ಬಳಲುತ್ತಿದ್ದೇನೆ. ವೈದ್ಯರು ನನಗೆ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಆದರೆ, ನನಗೆ ಹೆದರಿಕೆಯಾಗಿದೆ. ಬದಲಿ ಮಂಡಿ ಜೋಡಣೆ ಬಗ್ಗೆ ದಯವಿಟ್ಟು ನನಗೆ ಹೆಚ್ಚು ವಿವರ ನೀಡುವಿರಾ


-ಯಾವುದೇ ಕಾರಣದಿಂದಾಗಿ ಉಂಟಾಗುವ ನೋವಿನಿಂದ ಕೂಡಿದ ತೀವ್ರ ಆರ್ಥರೈಟಿಸ್‌ಗೆ ಬದಲಿ ಮಂಡಿಯ ಜೋಡಣೆ ಅತ್ಯಂತ ಯಶಸ್ವಿ ಆಯ್ಕೆಯಾಗಿದೆ. ಶಸ್ತ್ರಕ್ರಿಯೆ ಸಂದರ್ಭದಲ್ಲಿ ಕಾಲಿನ ಸೂಕ್ತ ಜೋಡಣೆಯನ್ನು ಪುನರ್ ಸ್ಥಾಪಿಸುವುದಲ್ಲದೆ ಅತ್ಯಂತ ನಯವಾದ ಕೃತಕ ಕೀಲನ್ನು ಹಾನಿ ಹೊಂದಿದ ಕೀಲಿನ ಮೇಲ್ಮೈ ಬದಲಿಗೆ ಜೋಡಿಸಲಾಗುತ್ತದೆ. ವಿಭಿನ್ನ ವಸ್ತುಗಳಿಂದ ತಯಾರಾದ ಹಾಗೂ ವಿಭಿನ್ನ ಆಕಾರಗಳ ವಿಶೇಷವಾದ ಕೀಲುಗಳು ಲಭ್ಯವಿವೆ. ಇವು ಯುವ ರೋಗಿಗಳಿಗೆ ಮತ್ತು ಮಹಿಳೆಯರಿಗೆ ಸೂಕ್ತವಾಗಿರುತ್ತವೆ. ರೋಗಿಯ ಸಾಮಾನ್ಯ ಆರೋಗ್ಯ ಮತ್ತು ಶಸ್ತ್ರಕ್ರಿಯೆಗಾಗಿ ದೈಹಿಕ ದೃಢತೆಯನ್ನು ಸುರಕ್ಷೆಯನ್ನು ಖಾತ್ರಿ ಪಡಿಸಿಕೊಳ್ಳಲು ಶಸ್ತ್ರಕ್ರಿಯೆಗೆ ಮುನ್ನ ತಪಾಸಣೆ ಮಾಡಿಸಬೇಕು.

ಮೂಲ : ಪ್ರಜಾವಾಣಿ

No comments:

Post a Comment