ಸುಟ್ಟಗಾಯಗಳು ಮತ್ತು ಬಿಸಿನೀರಿಂದ ಉಂಟಾದ ಬೊಬ್ಬೆಗಳು ಕಲೆ, ಅಂಗಾಂಗಗಳ ವಿಕೃತಿ ಮತ್ತು ಮಾನಸಿಕ ಯಾತನೆಯಂತಹ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತವೆ. ಇವು ತುಂಬ ದೀರ್ಘಕಾಲೀನ ಇಲ್ಲವೇ ಶಾಶ್ವತ ಪರಿಣಾಮಗಳು. ಹಾಗಾಗಿ ಸುಟ್ಟಗಾಯಗಳು ಮತ್ತು ಬಿಸಿನೀರಿಂದ ಉಂಟಾದ ಬೊಬ್ಬೆಗಳಿಗೆ ಎಚ್ಚರಿಕೆಯಿಂದ ಕೂಡಿದ ನಿಖರ ಮತ್ತು ಪ್ರಮಾಣಿಕ ಚಿಕಿತ್ಸೆ ಅತ್ಯಗತ್ಯ.
ಸುಟ್ಟಗಾಯಗಳಾದರೆ
ದೇಹವು ಒಣ ಉಷ್ಣಕ್ಕೆ ಮತ್ತು ಪ್ರಬಲ ರಸಾಯನಿಕಗಳ ಸಂಪರ್ಕ ಅಥವಾ ಅವುಗಳ ತೀರಾ ಸಮೀಪಕ್ಕೆ ಹೋದಾಗ ಸುಟ್ಟಗಾಯಗಳಾಗುತ್ತವೆ. ತುಂಬಾ ಸಾಮಾನ್ಯವಾಗಿ ಆಗುವ ಸುಟ್ಟಗಾಯಗಳೆಂದರೆ:
- ಬಿಸಿ ಹಂಚು, ಸಟ್ಟುಗ, ಪ್ಯಾನ್ ನ ಹಿಡಿಕೆಗಳು ಮುಂತಾದ ಅಡುಗೆಯ ಪಾತ್ರೆಗಳು
- ಕೆಟಲ್‌ಗಳು, ಐರನ್ ಬಾಕ್ಸ್ ಗಳು ಮತ್ತು ಆಸ್ಪತ್ರೆಯ ಆಧುನಿಕ ಇಲೆಕ್ಟ್ರಿಕಲ್ ಪರಿಕರಗಳು
- ಇಲೆಕ್ಟ್ರಿಕ್ ಒಲೆಗಳು, ಗ್ಯಾಸ್ ಮತ್ತು ಒಲೆಯಿಂದ ಬರುವ ಹಠಾತ್ ಬೆಂಕಿ
- ಬಟ್ಟೆಗಳು ಮತ್ತು ಇತರ ಪದಾರ್ಥಗಳಿಗೆ ಹಠಾತ್ತಾಗಿ ಹತ್ತಿದ ಬೆಂಕಿ
- ಬ್ಲೀಚ್ ಮತ್ತಿತರ ಪ್ರಬಲ ಪೂತಿನಾಶಕಗಳು
- ವಿಪರೀತ ಬಿಸಿಲು ಮತ್ತು ಗಾಳಿ
- ಹಗ್ಗಕ್ಕೆ ಸಂಬಂಧಿಸಿದ ಅಪಘಾತಗಳು
ದೇಹದ ತೆರೆದ ಭಾಗದಲ್ಲಿಯೇ ಅಂದರೆ ಕೈಗಳು, ಮಣಿಕಟ್ಟು ಮತ್ತು ತಲೆ ಮುಂತಾದ ಕಡೆಗಳಲ್ಲಿಯೇ ಸುಟ್ಟ ಗಾಯಗಳಾಗುವುದು ಹೆಚ್ಚು; ಆದರೆ ಬಿಸಿ ಆವಿ ಅಥವಾ ಬಿಸಿ ನೀರಿನಿಂದ, ಕೊಬ್ಬುಗಳು ಅಥವಾ ಎಣ್ಣೆಗಳು, ಅಥವಾ ಇತರೆ ಬಿಸಿ ದ್ರವಗಳು ದೇಹದ ಸಂಪರ್ಕಕ್ಕೆ ಬಂದಾಗ ಬೆಂದ ಗಾಯಗಳು ಉಂಟಾಗುತ್ತವೆ. ಈ ಬಗೆಯ ಗಾಯಗಳು ಆಗುವ ವಿಧಾನಗಳು ಬೇರೆಬೇರೆಯಾಗಿದ್ದರೂ ಅವುಗಳು ಚರ್ಮದ ಮೇಲೆ ಉಂಟುಮಾಡುವ ಪರಿಣಾಮ ಒಂದೇ. ‘ಸುಟ್ಟ ಗಾಯ’ ಎಂದರೆ ಅದು ಒಣ ಉಷ್ಣದಿಂದ ಉಂಟಾಗಿರಬಹುದು ಇಲ್ಲವೇ ಬಿಸಿಯಾದ ಆವಿಯಿಂದ ಉಂಟಾಗಿರಬಹುದು. ಈ ಗಾಯವು ಚರ್ಮ ಕೆಂಪಗಾಗುವುದರಿಂದ ಹಿಡಿದು ಬೊಬ್ಬೆ ಬರುವುದಾಗಿರಬಹುದು. ಇಲ್ಲವೇ ಇನ್ನೂ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಅಂಗಾಂಶಗಳೇ ಬೆಂದು ಹೋಗಿರಬಹುದು.
ಅನೇಕ ಸುಟ್ಟಗಾಯಗಳು ಅಡುಗೆ ಮನೆಯಲ್ಲಿಯೇ ಆಗುತ್ತವೆ ಹಾಗಾಗಿ ಅವುಗಳಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡುವುದು ಒಳಿತು. ಆದರೆ ಇಲ್ಲಿ ನಾವು ಅವಗಢಗಳನ್ನು ತಡೆಯುವುದಕ್ಕೆ ಹೆಚ್ಚು ಒತ್ತು ಕೊಡಬೇಕು. ಹಿರಿಯರು, ಅಂಗವಿಕಲರು ಮತ್ತು ಮಕ್ಕಳು ಅದರಲ್ಲೂ ಅಂಬೆಗಾಲಿಕ್ಕುವ ಮಕ್ಕಳು ಇಂತಹ ಅವಗಢಗಳಿಗೆ ಗುರಿಯಾಗುವುದು ಹೆಚ್ಚು. ಮಕ್ಕಳು ಮತ್ತು ಹಿರಿಯರಲ್ಲಿನ ಸುಟ್ಟಗಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ಕೆಲವು ಮುಖ್ಯವಾಗಿ ಮಾಡಬಾರದ ಕೆಲಸಗಳು
ಸುಟ್ಟಗಾಯಗಳಿಂದ ದೇಹಕ್ಕೆ ಆಗುವ ಹಾನಿಯನ್ನು ವಿವರಿಸುವ ಮೊದಲು ಮತ್ತು ತಜ್ಞರು ಬರುವ ಮುನ್ನ ಗಾಯಾಳುವಿಗೆ ನೀವು ಯಾವ ಬಗೆಯ ಸಹಾಯ ಮಾಡಬಹುದು ಎಂಬುದನ್ನು ತಿಳಿಯುವ ಮುಂಚೆ, ಇಂತಹ ಗಾಯಗಳಾದಾಗ ನೀವು ಏನನ್ನು ಮಾಡಬಾರದು ಎಂಬುದನ್ನು ತಿಳಿಯಬೇಕು.
- ಸುಟ್ಟ ಭಾಗಕ್ಕೆ ಯಾವುದೇ ಕಾರಣಕ್ಕೂ ಬೆಣ್ಣೆ, ಹಿಟ್ಟು ಅಥವಾ ಬೇಕಿಂಗ್ ಸೋಡಾವನ್ನು ಹಚ್ಚಬೇಡಿ
- ಯಾವುದೇ ಬಗೆಯ ಮುಲಾಮು, ಲೊಷನ್ ಅಥವಾ ಎಣ್ಣೆಯನ್ನು ಚಿಕಿತ್ಸೆಯ ಭಾಗವಾಗಿ ಹಚ್ಚಬೇಡಿ
- ಬೊಬ್ಬೆಗಳು ಬಂದಿದ್ದರೆ ಅವನ್ನು ತೂತು ಮಾಡುವುದು ಅಥವಾ ಒಡೆಯುವುದು ಮಾಡಬೇಡಿ
- ಗಾಯವನ್ನು ತೀರಾ ಅವಶ್ಯವಿದ್ದಷ್ಟು ಮಾತ್ರವೇ ಮುಟ್ಟಿ
- ದೇಹಕ್ಕೆ ಅಂಟಿಕೊಂಡಿರುವ ಬಟ್ಟೆಗಳನ್ನು ಎಳೆದು ತೆಗೆಯ ಬೇಡಿ
ಈಗಿನ ಬಹುತೇಕ ಬಟ್ಟೆಗಳು ಕೃತಕ ನೂಲಿನಿಂದ ಮಾಡಿದವುಗಳಾಗಿದ್ದು ಬಿಸಿ ತಗುಲಿದಾಗ ಅವು ಚಾಕೊಲೇಟಿನಂತೆ ಕರಗಿ ಮೈಗೆ ಅಂಟಿಕೊಂಡು ಬಿಡುತ್ತವೆ. ನೀವು ಅದನ್ನು ತೆಗೆಯಲು ಪ್ರಯತ್ನಿಸಿದರೆ ಅದರಿಂದ ಚರ್ಮವು ಕಿತ್ತು ಬಂದು ಅನಗತ್ಯ ನೋವು ಮತ್ತು ಸೋಂಕು ಉಂಟಾಗುವ ಸಾಧ್ಯತೆಯಿರುತ್ತದೆ. ಬಟ್ಟೆ ಸುಟ್ಟಿರುವುದರಿಂದ ಶುದ್ಧೀಕೃತವಾದಂತಾಗಿರುತ್ತದೆ. ಹಾಗಾಗಿ ಅದನ್ನು ತೆಗೆಯದೆ ಹಾಗೇ ಬಿಟ್ಟರೆ ಒಳ್ಳೆಯದು.
ಸಾಮಾನ್ಯ ಚಿಕಿತ್ಸೆ
ಕೆಲವು ವಿಶೇಷ ಬಗೆಯ ಸುಟ್ಟಗಾಯಗಳನ್ನು ಬಿಟ್ಟರೆ; ಉಳಿದೆಲ್ಲ ಸುಟ್ಟಗಾಯಗಳಿಗೆ ಒಂದೇ ಬಗೆಯ ಚಿಕಿತ್ಸೆ ನೀಡಲಾಗುತ್ತದೆ. ಸಣ್ಣ ಪುಟ್ಟ ಗಾಯಗಳನ್ನು ಬಿಟ್ಟು ಉಳಿದೆಲ್ಲಾ ಸುಟ್ಟಗಾಯಗಳು ಅಪಾಯಕಾರಿ, ಯಾತನಾಮಯ ಮತ್ತು ಆಘಾತಕಾರಿಯಾಗಿವೆ. ಅವು ಸಾಧಾರಣವಾಗಿ ಮನೆಯಲ್ಲಿ ಆಕಸ್ಮಿಕವಾಗಿ, ರಸ್ತೆ ಅಪಘಾತದಲ್ಲಿ ಪೆಟ್ರೋಲ್ ಸೋರಿಕೆಯಿಂದ ಉಂಟಾದ ಬೆಂಕಿಯಿಂದ ತೀವ್ರಗಾಯ ಆಗುತ್ತವೆ. ಸಹಾಯ ಮಾಡುವಾಗ ನೆನಪಿನಲ್ಲಿ ಇಡಬೇಕಾದ ಮುಖ್ಯ ಅಂಶವೆಂದರೆ ಸಮಾಧಾನದಿಂದ ಇರುವುದು ಮತ್ತು ಆಘಾತದಿಂದ ಆತಂಕಗೊಂಡಿರುವ ಗಾಯಳುವಿಗೆ ಧೈರ್ಯ ತುಂಬುವುದು. ಅವನ ಜೊತೆ ನಯವಾಗಿ ವ್ಯವಹರಿಸಿ. ತ್ವರಿತವಾಗಿ, ಸಕ್ರಮವಾಗಿ ಕೆಲಸ ಮಾಡಿ. ಯಾವುದನ್ನು ಮೊದಲು ಮಾಡಬೇಕೋ ಅದನ್ನೇ ಮಾಡಿ.
ಒಂದು ಸಲ ಚರ್ಮ ಮತ್ತು ಅಂಗಾಂಶಗಳು ಸುಟ್ಟು ಹೋದಾಗ, ದ್ರವದ ಕೊರತೆ ಉಂಟಾಗುವುದು. ಹಾನಿಯಾದ ಅಂಗಾಂಶಗಳು ಉಷ್ಣವನ್ನು ಹಿಡಿದಿಟ್ಟು ಕೊಂಡು ಇನ್ನೂ ಹೆಚ್ಚಿನ ಹಾನಿ ಮತ್ತು ನೋವಿಗೆ ಕಾರಣವಾಗುವವು. ಚಿಕಿತ್ಸೆಯ ಮೊದಲ ಉದ್ದೇಶ ಆ ಉಷ್ಣವನ್ನು ಕಡಿಮೆ ಮಾಡುವುದು. ಪ್ರಥಮ ಚಿಕೆತ್ಸೆಯು ಹಾನಿಗೊಳಗಾದ ಅಂಗಾಂಶಗಳ ಉಷ್ಣತೆಯನ್ನು ಕಡಿಮೆ ಮಾಡಬೇಕು.
ಆರೈಕೆ
- ಗಾಯವಾದ ಭಾಗವನ್ನು ತಣ್ಣೀರಿನಲ್ಲಿ ಅದ್ದಿರಿ. ಒಂದು ಬಕೆಟ್ ಅಥವಾ ಅಗಲವಾದ ಪಾತ್ರೆ, ಅಡುಗೆ ಮನೆಯಲ್ಲಿನ ಸಿಂಕು ಇಲ್ಲವೆ ಸುಟ್ಟ ಭಾಗವನ್ನು ತೆಳುವಾಗಿ ಸುರಿಯುತ್ತಿರುವ ತಣ್ಣೀರಿನ ನಳದ ಕೆಳಗೆ ಸುಮ್ಮನೆ ಹಿಡಿದರೂ ಸಾಕು.
- ಸುಟ್ಟ ಭಾಗವನ್ನು ೧೫ ನಿಮಿಷ ತಣ್ಣೀರಿನಲ್ಲಿ ಮುಳುಗಿಸಬೇಕು ಅಥವ ನೋವು ಕಡಿಮೆಯಾಗುವರೆಗೆ ಹಿಡಿಯಬೇಕು. ಸುಟ್ಟಿರುವ ಭಾಗವನ್ನು ನೀರಿನಲ್ಲಿ ಮುಳುಗಿಸುವುದ ಆಗದಿದ್ದರೆ, ( ಉಧಾಹರಣೆಗೆ- ಮುಖದ ಗಾಯವಾದರೆ) ಶುಚಿಯಾದ ಬಟ್ಟೆ ಇಲ್ಲವೆ ಮೃದುವಾದ ವಸ್ತುವನ್ನು ನೀರಿನಲ್ಲಿ ಅದ್ದಿ ಗಾಯದ ಮೇಲೆ ಬಲವಾಗಿ ಒತ್ತಬೇಕು. ಅದನ್ನು ಪದೇ ಪದೇ ನೀರಿನಲ್ಲಿ ನೆನಸಿ ಗಾಯದ ಮೇಲೆ ಒತ್ತಬೇಕು. ಅದನ್ನು ಆಗಾಗ ಬದಲಾಯಿಸಬೇಕು. ಆದರೆ ಸಟ್ಟಭಾಗದ ಮೇಲ್ ಮೈಯನ್ನು ಉಜ್ಜಬಾರದು.ಈ ಚಿಕಿತ್ಸೆಯು ಸುಟ್ಟ ಅಂಗಾಂಶದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಹಾನಿ , ಕೆಂಪಾಗುವುದು, ಬೊಬ್ಬೆಬರುವುದು ಮತ್ತು ನೋವನ್ನು ಕಡಿಮೆಮಾಡುತ್ತದೆ.
- ಗಾಯವಾದ ತಕ್ಷಣ ಸಾಧ್ಯವಾದಷ್ಟು ಬೇಗ ಉಂಗುರ, ಬಳೆ, ಬ್ರಾಸ್ಲೆಟ್, ಷೂಗಳು, ಮೊದಲಾದ ಬಿಗಿಯಾಗಿರುವ ವಸ್ತುಗಳನ್ನು ತೆಗೆಯಿರಿ. ಏಕಂದರೆ ಊತ ಆದರೆ ನಂತರ ಅವುಗಳನ್ನು ತೆಗೆಯುವುದು ಕಷ್ಟವಾಗುತ್ತದೆ
- ನೋವು ಕಡಿಮೆ ಆದ ಮೇಲೆ ಚಿಕ್ಕ ಪುಟ್ಟ ಮೇಲೆ ಮೇಲು ಮೇಲಿನ ಗಾಯಗಳನ್ನು ಹುಷಾರಾಗಿ ತಟ್ಟಿ
- ಒಣಗಿಸಬೇಕು ನಂತರ ಡ್ರೆಸ್ಸಿಂಗ್ ಬಟ್ಟೆಯಿಂದ ಕಟ್ಟಬೇಕು. ದೊಡ್ಡ ಮತ್ತು ಆಳವಾದ ಗಾಯಗಳನ್ನು ನೀರಿನಿಂದ ತೊಳೆದ ನಂತರ ಶುಚಿಯಾದ, ಒಗೆದ ಬಟ್ಟೆಯಿಂದ ಲಘುವಾಗಿ ಕಟ್ಟ ಬೇಕು. (ಶುಚಿಯಾದ ದಿಂಬಿನ ಕವರ್ ಕೈಕಾಲುಗಳಿಗೆ ಕಟ್ಟಲು ಬಳಸವುದು ಉತ್ತಮ).
- ವೈದ್ಯರಿಗೆ ಹೇಳಿ ಕಳುಹಿಸಿ ಅಥವ ಆಂಬುಲೆನ್ಸ್ ಗೆ ಕರೆ ಮಾಡಿ
- ಯಾವುದೆ ಸುಟ್ಟ ಗಾಯವು ಅಂಚೆ ಚೀಟಿಗಿಂತ (2x21/2 cm) ದೊಡ್ಡದಾಗಿದ್ದರೆ ವೈದ್ಯರನ್ನು ಕಾಣಲೇಬೇಕು. ತಂಪು ಚಿಕಿತ್ಸೆಯ ತರುವಾಯ ವೈದ್ಯರನ್ನು ನೋಡಿ
- ದೊಡ್ಡದಾದ ಗಾಯವಾಗಿದ್ದರೆ ಆಸ್ಪತ್ರೆಯ ಆರೈಕೆ ಅತಿ ಅಗತ್ಯ. ಮಂಜುಗಡ್ಡೆಯನ್ನು ಟವಲಿನಲ್ಲಿ ಸುತ್ತಿ ಗಾಯಕ್ಕೆ ಪ್ರಯಾಣದ ಉದ್ದಕ್ಕೂ ತಂಪು ಚಿಕಿತ್ಸೆ ನೀಡುತ್ತಿರಬೇಕು,
- ಸೋಂಕನ್ನು ತಡೆಯಲು ಸುಟ್ಟುಹೋದ ಅಂಗಾಂಶವನ್ನು ಮುಚ್ಚಬೇಕು. ಸೋಂಕು ಅದರಿಂದ ಬೇಗ ಹರಡುತ್ತದೆ. ಅಲ್ಲದೆ ರೋಗಿಯು ಗಾಯವನ್ನು ನೋಡದಿದ್ದರೆ ಆತಂಕ ಹೆಚ್ಚುವುದಿಲ್ಲ. ಟೇಬಲ್ ಕ್ಲಾತ್ , ಬೆಡ್ ಷೀಟ್ ನಿಂದ (ನೈಲಾನ್ ಬೇಡ) ದೇಹವನ್ನು ಮುಚ್ಚಬಹುದು. ಅದು ಸುಟ್ಟ ಜಾಗವನ್ನು ಸರಿಯಾಗಿ ಮುಚ್ಚಿರಲಿ
- ವೈದ್ಯರಿಗೆ, ಆಂಬುಲೆನ್ಸ್ ಗೆ ಕಾಯುತ್ತಿರುವಾಗ ರೋಗಿಗೆ ಭರವಸೆ ನೀಡಿ, ಧೈರ್ಯ ಹೇಳಿ. ಮಗುವಾದರೆ ಎತ್ತಿಕೊಂಡು ಅಪ್ಪಿಕೊಳ್ಳಿ. ಆದರೆ ಹಾನಿಯಾಗದಂತೆ ಎಚ್ಚರ ವಹಿಸಿ
ವಿಶೇಷ ಚಿಕಿತ್ಸೆ ಅಗತ್ಯವಿರುವ ಸಂದರ್ಭಗಳು -ಬಟ್ಟೆಗೆ ಬೆಂಕಿಹತ್ತಿದಾಗ
- ಬಟ್ಟೆಯು ಇನ್ನೂ ಹತ್ತಿ ಕೊಂಡು ಉರಿಯುತ್ತಿದ್ದರೆ, ನೀರು ಹಾಕಿ ಬೆಂಕಿಯನ್ನು ನಂದಿಸಿ. ದೇಹದ ಸುತ್ತಲೂ ಕಂಬಳಿ (ಬ್ಲಾಂಕೆಟ್), ಕೋಟು, ಯವುದೆ ದೊಡ್ಡ ಬಟ್ಟೆಯನ್ನು ಸುತ್ತಿ, ಆಮ್ಲ ಜನಕದ ಪೂರೈಕೆಯನ್ನು ತಡೆಯಿರಿ. ಬೆಂಕಿ ಆರಿಸುವಾಗ ನಿಮಗೆ ಬೆಂಕಿ ತಗುಲದಂತೆ ಬಟ್ಟೆಯು ನಿಮ್ಮ ಮುಂದಿರಲಿ
- ಬೆಂಕಿ ತಗುಲಿದ ಯಾರೆ ಆದರೂ ಗಾಬರಿಯಾಗುತ್ತಾರೆ. ಅವರು ಒಂದು ಕೋಣೆ ಯಿಂದ ಇನ್ನೊಂದು ಕೋಣೆಗೆ ಓಡಬಹುದು. ಇಲ್ಲವೆ ಹೆಚ್ಚು ಗಾಳಿ ಇರುವ ಪ್ರದೇಶಕ್ಕೆ ಧಾವಿಸಬಹುದು. ಅದರಿಂದ ಬಂಕಿ ಇನ್ನೂಹೆಚ್ಚು ಜೋರಾಗಿ ಉರಿಯತೊಡಗುವುದು. ಆದ್ದರಿಂದ ಅವರನ್ನು ಚಲಿಸದೆ ಒಂದೆ ಕಡೆ ನಿಲ್ಲಲು ಹೇಳಿ.
- ಬೆಂಕಿ ನಂದಿದ ನಂತರ ಮೇಲೆ ತಿಳಿಸಿದ ಸಾಮಾನ್ಯ ಚಿಕಿತ್ಸೆ ಕೊಡಿ
ರಸಾಯನಿಕ ವಸ್ತುಗಳು ಕಣ್ಣಿಗೆ ಬಿದ್ದಾಗ.
ಇದು ಕಣ್ಣಿಗೆ ಶಾಶ್ವತ ಹಾನಿ ಮಾಡಬಹುದು ಮತ್ತು ದೃಷ್ಟಿಯೇ ಇಲ್ಲದಾಗಿಸಬಹುದು. ಆದುದರಿಂದ ಚಿಕಿತ್ಸೆಯನ್ನು ಅತಿ ಶೀಘ್ರವಾಗಿ ಮಾಡಬೇಕು. ರಸಾಯನಿಕ ವಸ್ತುವನ್ನು ತಕ್ಷಣ ದುರ್ಬಲ ಗೊಳಿಸಬೇಕು.
- ರೋಗಿಯನ್ನು ಮುಖ ಮೇಲಾಗಿ ಮಲಗಿಸಿ. ಹೆಬ್ಬೆರಳು ಮತ್ತು ಕೈಬೆರಳುಗಳಿಂದ ರೆಪ್ಪೆಗಳನ್ನು ಅಗಲಿಸಿ. ಮೂಗಿನ ಕಡೆಯಿಂದ ತಣ್ಣನೆ ನೀರನ್ನು ಕಣ್ಣಿನ ಮುಂಭಾಗದ ಮೇಲೆ ಸತತವಾಗಿ ಹಾಕುತ್ತಿರಿ. (ರಸಾಯನಿಕವು ಇನ್ನೊಂದು ಕಣ್ನಿಗೂ ತೊಂದರೆ ಮಾಡುವುದನ್ನು ತಡೆಯಲು)
- ಅದರಲ್ಲಿನ ರಸಾಯನಿಕ ಅಂಶವು ತುಸುವೂ ಇರದಂತೆ ಮಾಡಲು ಕಣ್ಣು ರೆಪ್ಪೆಯನ್ನು ಪದೇ ಪದೇ ಬಡಿಯುತ್ತಿರಲಿ.
- ಈರೀತಿ ತೊಳೆಯುವುದನ್ನು ಕನಿಷ್ಟ ಹತ್ತು ನಿಮಿಷ ಮುಂದುವರಿಸಿ. ಇದನ್ನು ಎಡೆಬಿಡದೆ ಮಾಡಿ. ಯಾವುದೆ ಕಾರಣಕ್ಕೂ ನಿಲ್ಲಿಸಬೇಡಿ.
- ಈ ಚಿಕಿತ್ಸೆಯ ನಂತರ ಕಣ್ಣಿನ ಮೇಲೆ ಹತ್ತಿಯನ್ನು ಇಟ್ಟು ಅದು ಸರಿದಾಡದಂತೆ ಬಟ್ಟೆ ಕಟ್ಟಿ.
- ರೋಗಿಗೆ ಸಮಾಧಾನ ಹೇಳುತ್ತಾ ಆಂಬುಲೆನ್ಸ್ ಕರೆಸಿ. ಆಸ್ಪತ್ರಗೆ ಧಾವಿಸಿ
ವಿದ್ಯುತ್ ನಿಂದ ಆದ ಸುಟ್ಟ ಗಾಯ
ಇವು ಸಾಧಾರಣವಾಗಿ ಚಿಕ್ಕದಾಗಿರುತ್ತವೆ. ಆದರೂ ತುಂಬ ಆಳವಾಗಿರಬಹುದು. ಅವು ಸಾಮಾನ್ಯವಾಗಿ ವಿದ್ಯುತ್ ದೇಹವನ್ನು ಪ್ರವೇಶಿಸಿದ ಮತ್ತು ಹೊರಹೋದ ಸ್ಥಳದಲ್ಲಿಯೇ ಆಗಿರುತ್ತವೆ
- ವಿದ್ಯುತ್ ಪ್ರವಾಹವನ್ನು ಸ್ವಿಚ್ ಆಫ್ ಮಾಡಿ ತಕ್ಷಣ ನಿಲ್ಲಿಸಿ. ಬಾಧಿತನಿಗೆ ಚಿಕಿತ್ಸೆ ನೀಡುವ ಮೊದಲು ಪ್ಲಗ್ ಅನ್ನು ತೆಗೆಯಿರಿ
- ಬಾಧಿತನು ನೀರಿನಲ್ಲಿದ್ದರೆ ನೀವು ಹತ್ತಿರ ಹೋಗಬೇಡಿ, ತೇವವು ಉತ್ತಮ ವಿದ್ಯುತ್ ವಾಹಕ. ಅದಕ್ಕಾಗಿಯೇ ಅವನನ್ನು ಕೊಂಕುಳಲ್ಲಿ ಹಿಡಿಯಬೇಡಿ
- ಅವನ ಉಸಿರಾಟವನ್ನು ಪರೀಕ್ಷಿಸಿ ಕರೆಂಟು ಅವನ ಎದೆಯ ಮೂಲಕ ಹೋಗಿರಬಹುದು ಅದರಿಂದ ಹೃದಯ ನಿಶ್ಚಲವಾಗಿ, ಎದೆ ಬಡಿತ ನಿಂತಿರಬಹುದು. ಹಾಗಿದ್ದರೆ ತಕ್ಷಣ ಪುನಶ್ಚೇತನ ಚುಂಬನ ನೀಡಿ. ಎದೆಯನ್ನು ಜೋರಾಗಿ ನೀವಿ..
- ಸಾಮಾನ್ಯ ಪ್ರಥಮ ಚಿಕಿತ್ಸೆಯನ್ನು ಮುಂದುವರಿಸಿ
ಮೂಲ: ಪೋರ್ಟಲ್ ತಂಡ
No comments:
Post a Comment